ಅವರೇಮೇಳದ ಅನುಭವಗಳು : A Rant.
Had been to Avarekaayi mela.
ಅಡುಗೆ ಪದಾರ್ಥಗಳ ಬಗೆಗಿನ ವಿಶೇಷ ಆಸ್ಥೆ ಹಾಗೂ ಗೌರವವಿರುವ ನಾನು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆಯುತ್ತಿರುವ ಅವರೆಕಾಯಿ ಮೇಳಕ್ಕೆ ಬೆರಗುಗಣ್ಣುಗಳನ್ನಿಟ್ಟುಕೊಂಡು ಹೋದೆನು. ಮೇಳದ ಸುತ್ತಾಟ ಮುಗಿಸಿ ಆಚೆಗೆ ಬಂದಾಗ ಯಾಕಾದರೂ ಇಲ್ಲಿಗೆ ಬಂದೆನೋ ಎಂದು ಎನಿಸುತ್ತಿದೆ.
ಈ ಮೇಳವು ನಿಯೋಜಕರ ಬೇಜವಾಬ್ದಾರಿಗೆ ಹಿಡಿದಿರುವ ಕೈಗನ್ನಡಿಯಾಗಿದೆ. ಗ್ರಾಹಕ ದೇವೋ ಭವ ಎಂಬುದು ಭಾರತೀಯ ಸಂಸ್ಕೃತಿಯ ಭಾಗವೇ ಆಗಿದೆ. ಗ್ರಾಹಕನಿಗೆ ಗೌರವ ಕೊಡದ ಉದ್ಯಮದಲ್ಲಿ ಗೆಲುವು ಕಷ್ಟ ಕಷ್ಟ. ಆದರೆ ಸದರಿ ಮೇಳದ ಆಯೋಜಕರು ಗ್ರಾಹಕನನ್ನು ತಮ್ಮ ಚಪ್ಪಲಿಯ ಕೆಳಗೆ ಇಟ್ಟಿರುವಂತೆ ಭಾಸವಾಯಿತು. ಕಾಲೇಜಿನ ಮೈದಾನದಲ್ಲಿ ಬಿಸಿಲಿನ ಝಳ ಯಾವ ಹಂತದಲ್ಲಿದೆ ಎಂಬುದು ಆಯೋಜಕರಿಗೆ ತಿಳಿಯದಿರುವ ವಿಷಯವೇನೂ ಅಲ್ಲ ಎಂದು ಭಾವಿಸಿರುವೆ. ಆದಾಗ್ಯೂ ಕೂಡ ಗ್ರಾಹಕನಿಗೆ ಯಾವುದೇ ರೀತಿಯ ನೆರಳಿನ ವ್ಯವಸ್ಥೆಯಿಲ್ಲ. ಆಹಾರ ಮಾರಾಟ ಮಾಡುವವರು ತಾವು ಕೂತಿರುವಷ್ಟು ಜಾಗಕ್ಕೆ ಶಾಮಿಯಾನ ಹಾಕಿಕೊಂಡಿದ್ದಾರೆ. ನಡುವೆ ನಡೆಯುವ ಸಣ್ಣ ಜಾಗಕ್ಕೆ ಶಾಮಿಯಾನದ ಚಪ್ಪರವಿದೆ ಎಂಬುದನ್ನು ಬಿಟ್ಟರೆ, ಬೇರೆಲ್ಲೂ ಯಾವುದೇ ರೀತಿಯ ನೆರಳಿನ ವ್ಯವಸ್ಥೆಯಿಲ್ಲ. ಅವರೆಬೇಳೆಯ ಖಾದ್ಯಗಳನ್ನು ತಿನ್ನುವ ಆಸೆಗಣ್ಣಿನಿಂದ ಬರುವ ಗ್ರಾಹಕನ ಕಾಂತಿಯನ್ನು ಸೂರ್ಯನಿಗೆ ಅರ್ಪಿಸಿ, ಬಸವಳಿದುಕೊಂಡೇ ಅವರೆ ಖಾದ್ಯವನ್ನು ತಿನ್ನಬೇಕಾದ ದುರ್ಭರ ಸ್ಥಿತಿ ಗ್ರಾಹಕನದ್ದು. ಅದರಲ್ಲೂ ಹಿರಿಯ ನಾಗರಿಕರು ಇರುವ ಕುಟುಂಬದ ಪಾಡಂತೂ ತುಂಬಾ ತಳಕಂಬಳಕವೇ ಆಗಿದೆ. ಇನ್ನು ಕೈತೊಳೆಯುವ ವ್ಯವಸ್ಥೆಯೂ ಕೂಡ ಅಶಿಸ್ತಿನಿಂದ ಕೂಡಿದೆ.
ವಾಸವಿಯವರೇ, ಗ್ರಾಹಕನನ್ನು ದೇವರಿಗೆ ಹೋಲಿಸುವ ಸಂಸ್ಕೃತಿ ನಮ್ಮದು. ಆದರೆ ನಿಮಗ್ಯಾಕೋ ಅದು ಬೇಕಾದಂತೆ ಕಾಣುವುದಿಲ್ಲ. ಹೊಸ ಖಾದ್ಯವನ್ನು ಗ್ರಾಹಕರಿಗೆ ಪರಿಚಯಿಸುವ ಒಳ್ಳೆಯ ಉದ್ದೇಶದೊಂದಿಗೆ ಮೇಳವನ್ನು ಆಯೋಜಿಸಿದ್ದೀರಿ. ಆದರೆ ನಿಮಗೆ ಗ್ರಾಹಕನ ಸುಸ್ಥಿತಿಯು ಆದ್ಯತೆಯಾಗಿಲ್ಲ. ಬೆಳಿಗ್ಗೆ ಹತ್ತು ದಾಟಿದರೆ ಸೂರ್ಯ ಯಾವ ರೀತಿಯಲ್ಲಿ ಬಿಸಿಲಿನ ಮೂಲಕ ನಮ್ಮನ್ನು ಸುಡುತ್ತಾನೆ ಎಂಬುದು ಸುಟ್ಟಿಸಿಕೊಂಡವರಿಗೆಲ್ಲರಿಗೂ ಗೊತ್ತು. ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಮೇಳವನ್ನು ಆಯೋಜಿಸುತ್ತಿದ್ದೀರಿ. ಇಷ್ಟು ವರ್ಷಗಳ ಯಶಸ್ವಿ ಮೇಳದ ತರುವಾಯವೂ ಗ್ರಾಹಕನಿಗೆ ತಣ್ಣನೇ ನೆರಳಿನಲ್ಲಿ ತಿನ್ನುವ ವ್ಯವಸ್ಥೆಯನ್ನು ಮಾಡಬೇಕು ಎಂದು ನಿಮಗೆ ಅನ್ನಿಸದೇ ಇದ್ದದ್ದು ಸೋಜಿಗ. ಅಷ್ಟಕ್ಕೂ ಏಸಿಯನ್ನೋ, ಫ್ಯಾನನ್ನೋ ಕೇಳುತ್ತಿಲ್ಲ. ಸೂರ್ಯನ ಸುಡುಬಿಸಲಿನ ಝಳದಿಂದ ರಕ್ಷಿಸುವ ನೆರಳನ್ನಷ್ಟೇ ಬಡ ಗ್ರಾಹಕ ಕೇಳುತ್ತಿರುವುದು. ಆದರೆ ನಿಮಗದು ಬೇಕಿಲ್ಲ. ಕೇಳಿದರೆ "ನೀವು ಅವರೆಕಾಯಿ ದೋಸೆಗೆ ದುಡ್ಡು ಕೊಡುತ್ತೀರ. ಹಾಕಿರುವ ಶಾಮಿಯಾನಕ್ಕೆ ದುಡ್ಡು ಕೊಡುತ್ತೀರಾ?" ಎಂದು ನೀವು ಕೇಳಲಿಕ್ಕೂ ಸಾಕು.
ವಾಸವೀ ಅವರೇ, ಒಂದು ಕಿವಿಮಾತು/ಕೋರಿಕೆ. 2023ರ ಮೇಳವೂ ಇದೇ ರೀತಿಯ ಅಧ್ವಾನವೇ ಆಗಿತ್ತು. 2024ರಲ್ಲೂ ಇದೇ ಹಾಡು. ನಿಮಗೆ ತಿದ್ದುಕೊಳ್ಳುವುದು ಬರುವುದಿಲ್ಲವೋ ಅಥವಾ ಬೇಕಾಗಿಲ್ಲವೋ ಗೊತ್ತಿಲ್ಲ. ಆದರೆ ಹೀಗೆಯೇ ನೀವು ಮುಂದುವರಿಸುವುದಾದರೆ, ದಯವಿಟ್ಟು ಮೇಳವನ್ನು ಮಾಡಬೇಡಿ. ಆಹಾರ ಖಾದ್ಯದ ಆಸಕ್ತಿಯಿಂದ ಬಂದ ಗ್ರಾಹಕನಿಗೆ ಯಾಕಾದರೂ ಬಂದೆನೋ ಎಂಬ ಭಾವನೆ ಬರುವಂತಹ ಅಧ್ವಾನದ ಆಗರವಾದ ಈ ಮೇಳ ಆಗದೇ ಹೋದರೇ ಲಾಯಕ್ಕು.
ಇನ್ನು ರೆಡ್ಡಿಟ್ಟಿನ ಸಹಜೀವಿಗಳೇ, ಅಧ್ವಾನ ಎಂಬ ಪದದ ನಿಜಾರ್ಥ ಅರಿವಾಗಬೇಕಾದರೆ ನೀವೂ ಒಮ್ಮೆ ಮೇಳಕ್ಕೆ ಭೇಟಿ ಕೊಡಿ.
Posted Jan 7, 2024, 7:18 AM UTC